ಆನಂದ 3
	ಸಂಸಾರ ದುಃಖರೂಪವಾದದ್ದು, ಹೇಯ ಎಂದು ಬಗೆದು ದಾರ್ಶನಿಕರು ಲೋಕೋತ್ತರವಾದ, ಸಂಸಾರಾತೀತವಾದ ಸ್ಥಿತಿಯೊಂದನ್ನು ನಿರ್ದೇಶಿಸಿ ಅದು ಬ್ರಹ್ಮ. ಆನಂದಮಯ ಎಂದು ವರ್ಣಿಸಿದರು. ಬ್ರಹ್ಮ ವಸ್ತುವಿನ ನೈಜ ಉಪನಿಷತ್ತಿನ ಕಲ್ಪನೆ. ತೈತ್ತಿರೀಯ ಉಪನಿಷತ್ತು ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಕೋಶಗಳನ್ನು ಹೇಳಿ, ಆತ್ಮನ ಅತ್ಯಂತ ಸೂಕ್ಷ್ಮವಾದ ಪಂಚಮಕೋಶವೇ ಆನಂದಮಯವೆನ್ನುವ ನಿಲುವನ್ನು ತಳೆದಿದೆ. ಆನಂದಬ್ರಹ್ಮೇತಿ ವ್ಯಜನಾತ್ ಎಂದು ಹೇಳಿ, ಆನಂದದಿಂದಲೇ ಎಲ್ಲವೂ ಹುಟ್ಟುವುದು, ಆನಂದದಲ್ಲಿಯೇ ನಿಲ್ಲುವುದು, ಆನಂದವನ್ನೇ ಸೇರುವುದು ಎಂದು ವಿವರಿಸುತ್ತದೆ. ಆನಂದ ಈ ನೆಲೆಯಲ್ಲಿ ನಿರವಧಿಕ ಸ್ವೇಚ್ಛಾನಂದವಾದ ಚರಭೂಮಿಕೆ. ಅದರ ಸಾಕ್ಷಾತ್ಕಾರಕ್ಕಾಗಿಯೇ ಸಂಸಾರ ಪ್ರವೃತ್ತವಾಗಿರುವುದು, ಪ್ರಪಂಚಿತವಾಗಿರುವುದು. ಆಕಾಶದಲ್ಲಿ ಆನಂದವಿರದಿದ್ದರೆ ಉಸಿರಾಡುವವರು ಯಾರು? ಬದುಕುವವರು ಯಾರು? (ಕೋಹ್ಯೇವಾತ್ಮತ್ ಕಃಪ್ರಾಣ್ಯಾತ್ ಯದೇಷ ಆಕಾಶ ಆನಂದೋ ನ ಸ್ಯಾತ್?). ಆನಂದ ಪರಮಾತ್ಮನ ಅನುಧ್ಭೂತ, ಅಮೂರ್ತಸ್ಥಿತಿಯೆಂದು ಎಲ್ಲ ಆಸ್ತಿಕ ಧರ್ಮಗಳೂ ಒಪ್ಪಿಕೊಂಡಿವೆ. ಲೋಕದಲ್ಲಿ ಒದಗುವ ಲೌಕಿಕಾನಂದವೂ ಬ್ರಹ್ಮಾನಂದದ ಒಂದು ಅಂಶವೇ, ಒಂದು ಪ್ರಕಾರವೇ. ಆನಂದ ಮೀಮಾಂಸೆಯಲ್ಲಿ ಶಂಕರಾಚಾರ್ಯರ ಮುಕ್ತಾನಂದವೂ ಸೇರುತ್ತದೆ. ಬ್ರಹ್ಮಜ್ಞಾನದಿಂದ ಮಾಯಾತಿಮಿರ ನಾಶವಾಗಿ ಆತ್ಮ, ನಿತ್ಯ ಶುದ್ಧಬುದ್ಧ ಮುಕ್ತವಾದಾಗ ಮುಕ್ತ್ಯಾನಂದದ ಆವಿರ್ಭಾವವಾಗುತ್ತದೆ. ಜೀವಾತ್ಮದ ಆನಂದದಲ್ಲಿಯೇ ಪರಮಾತ್ಮನ ಆನಂದದ ಅಭಿವ್ಯಕ್ತಿಯಾಗುವುದೆಂದು ಕೆಲವು ದರ್ಶನಗಳ ನಿಲುವು. ವೇದಾಂತವಲ್ಲದೆ, ನ್ಯಾಯ, ಸಾಂಖ್ಯ ಯೋಗಾದಿ ದರ್ಶನಗಳು ಕೂಡ ದುಃಖಾಂತಸ್ಥಿತಿಯಿಂದ ಆನಂದವನ್ನು ನಿರೂಪಿಸುತ್ತವೆ. ನ್ಯಾಯ ವೈಶೇಷಿಕರು ಅಜ್ಞಾನನಾಶವೇ ಅಪವರ್ಗವೆಂದು ನಿರ್ದೇಶಿಸುತ್ತಾರೆ; ಅಪವರ್ಗವೇ ಮುಕ್ತಿ, ಮೋಕ್ಷ, ಕೈವಲ್ಯ, ನಿಃಶ್ರೇಯಸ. ಇದೂ ಆನಂದರೂಪವೇ. ಬೌದ್ಧರ ನಿರ್ಮಾಣದಲ್ಲಿ ದುಃಖನಾಶವಿದ್ದರೂ ವೇದಾಂತಿಗಳ ಆನಂದ ಕಲ್ಪನೆಯಿಲ್ಲ. ದೇಹಾತ್ಮವಾದಿಗಳಾದ ಚಾರ್ವಾಕರು ಸಂಭೋಗಜನ್ಯವಾದ ಸುಖವೇ ಪರಮಾನಂದವೆಂದು ಬಗೆದರು. ಜೈನರ ಮೋಕ್ಷ ಸಮಸ್ತ ಕರ್ಮಕ್ಷಯದಿಂದ ಉಂಟಾಗುವ ಸ್ಥಿತಿ; ಇದರಲ್ಲಿ ಜೀವನ ಅನಂತಸುಖ ಸೇರಿದೆ. ಅವರ ಆನಂದದಲ್ಲಿ ದುಃಖದ ಅಭಾವವೂ ಅವಿಶ್ರಿತ ಸುಖವೂ ಮುಖ್ಯ ಲಕ್ಷಣಗಳು.									
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ